ಕಾಡುಕೋಣ

ಆರ್ಟಿಯೋಡ್ಯಾಕ್ಟೈಲ ಗಣದ ಬೋವಿಡೀ ಕುಟುಂಬಕ್ಕೆ ಸೇರಿದ ಸ್ಥೂಲಕಾಯದ ಪ್ರಾಣಿ (ಬೈಸನ್). ನೋಡುವುದಕ್ಕೆ ದೊಡ್ಡ ಗಾತ್ರದ ಕೋಣ ಅಥವಾ ಗೂಳಿಯಂತಿದೆ. ಇದರಲ್ಲಿ ಪ್ರಮುಖವಾಗಿ ಎರಡು ಜಾತಿಗಳಿವೆ. ಅಮೇರಿಕ ಮತ್ತು ಯೂರೋಪಿನಲ್ಲಿ ವಾಸಿಸುವ ಬೈಸನ್ ಎಂಬುದು ಮತ್ತು ಭಾರತದಲ್ಲಿ ಕಾಣ ಬರುವ ಬೈಬಾಸ್ ಗೌರಸ್ ಎಂಬುದು.

ಭಾರತದ ಕಾಡುಕೋಣಕ್ಕೆ ಗೌರ್ ಎಂಬ ಹೆಸರು ಇದೆ. ಇದು ಬರ್ಮ, ಮಲಯ ದೇಶಗಳಲ್ಲೂ ಕಾಣಬರುತ್ತದೆ. ಸುಮಾರು 750-1,800 ಮೀ. ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಗುಡ್ಡಗಳ ಮೇಲೆ ಹುಲ್ಲುಗಾವಲುಗಳಿರುವಂಥ ಸ್ಥಳಗಳಲ್ಲಿ ಸಾಮಾನ್ಯಾವಾಗಿ ವಾಸಿಸುತ್ತದೆ. ಕರ್ನಾಟಕದ ಮಲೆನಾಡುಗಳಲ್ಲಿ ಹಿಂದೊಮ್ಮೆ ಹೇರಳ ಸಂಖ್ಯೆಯಲ್ಲಿದ್ದ ಇದು ಈಗ ಬಿಳಿಗಿರಿರಂಗನ ಬೆಟ್ಟದ ಶ್ರೇಣಿ, ಬಂಡೀಪುರ ಅಭಯಾರಣ್ಯ, ಲಕ್ಕವಳ್ಳಿ, ನಾಗರಹೊಳೆ, ದಾಂಡೇಲಿ ಮುಂತಾದ ಪ್ರದೇಶಗಳಲ್ಲಿ ಮಾತ್ರ ಇದೆ. ಕಾಡು ಕೋಣ ಬಹಳ ದೊಡ್ಡ ಗಾತ್ರದ ಪ್ರಾಣಿ. ಪೂರ್ಣ ಬೆಳೆದ ಕೋಣ ಸುಮಾರು 10' (ಬಾಲ ಬಿಟ್ಟು) ಉದ್ದ, ಸುಮಾರು 6' ಎತ್ತರ ಇದ್ದು ಒಂದು ಟನ್ನಿಗಿಂತಲೂ ಹೆಚ್ಚು ತೂಗುತ್ತದೆ. ದೇಹದ ಬಣ್ಣ ಕಪ್ಪುಮಿಶ್ರಿತ ಕಂದು. ಕಾಲುಗಳು ಮಾತ್ರ ಬೆಳ್ಳಗಿವೆ. ಮೈಮೇಲೆ ಮೃದುವಾದ ರೇಷ್ಮೆಯಂಥ ಕೂದಲಿದೆ. ಹೆಗಲಿನಿಂದ ಬೆನ್ನಿನ ಮಧ್ಯದ ವರೆಗೂ ಎತ್ತರವಾದ ಏಣು ಇದೆ. ತಲೆಯ ಮೇಲೆ ಅಗಲವಾಗಿ ಹರಡಿರುವ, ಬಲವಾದ ಚೂಪುತುದಿಯ ಸೊಗಸಾದ ಕೊಂಬುಗಳಿವೆ. ಕೊಂಬುಗಳ ನಡುವೆ ಇರುವ ನೆತ್ತಿ ಏಣಿ ನಂತೆ ಎದ್ದುಕೊಂಡಿದೆ. ಸಾಮಾನ್ಯವಾಗಿ 5-20 ಪ್ರಾಣಿಗಳನ್ನೊಳಗೊಂಡ ಹಿಂಡಿನಲ್ಲಿ ಸಂಚರಿಸುತ್ತದೆ. ಸಂಜೆ ಮತ್ತು ಮುಂಜಾನೆಯ ಮಬ್ಬುಗತ್ತಲಲ್ಲಿ ಹುಲ್ಲು, ಚಿಗುರು ಮುಂತಾದುವನ್ನು ತಿನ್ನುತ್ತ ತಿರುಗಾಡುತ್ತದೆ. ಹಗÀಲಲ್ಲಿ ದಟ್ಟವಾದ ಪೊದೆಗಳ ನೆರಳಿನಲ್ಲಿ ಬಿಸಿಲಿನ ತಾಪದಿಂದ ದೂರವಿದ್ದು ಆಹಾರವನ್ನು ಮೆಲಕುಹಾಕುತ್ತ ವಿಶ್ರಮಿಸುತ್ತದೆ. ಇದು ನಾಚಿಕೆ ಹಾಗೂ ಸಾಧುಸ್ವಭಾವದ ಪ್ರಾಣಿ. ಆದರೆ ಗಾಯಗೊಂಡಾಗ, ಶತ್ರುಗಳು ಹಿಂಬಾಲಿಸಿದಾಗ ಕ್ರೂರವಾಗಿ ಹೋರಾಡಬಲ್ಲುದು. ಸಾಧಾರಣವಾಗಿ ಶತ್ರವಿನ ಸುಳಿವು ಸಿಕ್ಕಾಗ ಮರಗಿಡಗಳ ಮೆಳೆಗಳ ನಡುವೆ ವೇಗವಾಗಿ ಓಡಿಹೋಗುತ್ತದೆ. ಸಾಮಾನ್ಯವಾಗಿ ಎಮ್ಮೆ ಹಸುಗಳಂತೆಯೇ ಕೂಗುವುದಾದರು ಅಪಾಯ ಸನ್ನಿಹಿತವೆಂದು ಕಂಡಾಗ ಸಿಳ್ಳಿಯಂಥ ಗುಟುರು ಹಾಕುತ್ತದೆ. ಇದರ ಸಂತಾನೋತ್ಪತ್ತಿಯ ಕಾಲ ಆಗಸ್ಟ್-ಸೆಪ್ಟೆಂಬರ್ ತಿಂಗಳುಗಳು. ಒಂದು ಸಲಕ್ಕೆ ಒಂದೇ ಮರಿ ಹುಟ್ಟುತ್ತದೆ. ಉತ್ತರ ಅಮೆರಿಕದ ಕಾಡುಕೋಣದ ವೈಜ್ಞಾನಿಕ ಹೆಸರು ಬೈಸನ್ ಬೈಸನ್. ಇದನ್ನು ಬಫೆಲೋ ಎಂದೂ ಕೆರೆಯುವುದುಂಟು. ಅಮೆರಿಕಕ್ಕೆ ಯೂರೋಪಿನ ಜನ ಬರುವ ಮುಂಚೆ ಅಲ್ಲಿನ ವಿಶಾಲವಾದ ಬಯಲುಗಳಲ್ಲಿ ನಿರ್ಭಯವಾಗಿ ಸಂಚರಿಸಿ ತನ್ನದೇ ಆದ ರಾಜ್ಯವನ್ನು ಸ್ಥಾಪಿಸಿದ್ದ ಈ ಕಾಡುಕೋಣ ಇಂದು ಅಮೆರಿಕದ ಅಭಯಾರಣ್ಯಗಳು ಮತ್ತು ರಾಷ್ಟ್ರಿಯ ವನಗಳಲ್ಲಿ ಮಾತ್ರವೇ ಉಳಿದಿವೆ. ಹಿಂದಿನ ಕಾಲದಲ್ಲಿ ಇವುಗಳ ಸಂಖ್ಯೆ ಸುಮಾರು 60,000,000 ಇತ್ತೆಂದು ಅಂದಾಜಿದೆ. ಮಾಂಸ, ಚರ್ಮ ಮತ್ತು ಬೇಟೆಯ ಶೋಕಿಗಾಗಿ ಇವನ್ನು ಕೋಲ್ಲುತ್ತಬಂದಂತೆ ಇವುಗಳ ಸಂಖ್ಯೆಯೂ ಕಡಮೆಯಾಗುತ್ತ ಬಂದು 1900ರ ಸುಮಾರಿಗೆ ಇವುಗಳ ಸಂತತಿ ನಿರ್ನಾಮವಾಗುವ ಹಂತದಲ್ಲಿತ್ತು. ಆದರೆ ಈಗ ಕಾನೂನಿನ ರಕ್ಷಣೆ ದೊರಕಿ ಇವುಗಳ ಸಂಖ್ಯೆ ಕೊಂಚ ಏರುತ್ತ ಬಂದಿದೆ.

 ಅಮೆರಿಕದ ಕಾಡುಕೋಣವೂ ದೊಡ್ಡ ಗಾತ್ರದ ಪ್ರಾಣಿ. ಇದರ ಉದ್ದ 7'-12', ಎತ್ತರ 7'-9', ತೂಕ ಒಂದು ಟನ್ನಿಗಿಂತಲೂ ಹೆಚ್ಚು. ದೊಡ್ಡ ಗಾತ್ರದ ತಲೆ, ನೆತ್ತಿಯ ಮೇಲೆ ಜೋತುಬಿದ್ದಿರುವ ಕೂದಲಿನ ಗುಚ್ಛ, ಕೊರಳು ಮತ್ತು ಹೆಗಲನ್ನು ಸಂಪೂರ್ಣವಾಗಿ ಆವರಿಸಿರುವ ಜಡೆಗಟ್ಟಿದ ಉದ್ದ ಕೂದಲಿನ ಬೊಂತೆ, ಚಿಕ್ಕ ಕತ್ತು, ಅಗಲವಾದ ಹಣೆ-ಇವು ಇದರ ಮುಖ್ಯ ಲಕ್ಷಣಗಳು. ದೇಹದ ಹಿಂಭಾಗ ಮುಂಭಾಗಕ್ಕಿಂತ ಕಡಿಮೆ ಎತ್ತರದ್ದು. ಕೊಂಬುಗಳು ಚಿಕ್ಕವು, ತಲೆಯ ಮುಂಭಾಗದಲ್ಲಿ ಮೇಲ್ಮುಖನಾಗಿ ಬಾಗಿವೆ. ಇದು ಸಾಮಾನ್ಯವಾಗಿ ಹಿಂಡುಗಳಲ್ಲಿ ಸಂಚರಿಸುತ್ತದೆ. ಹಿಂಡಿಗೆ ಎಮ್ಮೆಯೇ ಮುಂದಾಳು. ಹುಲ್ಲು ಇದರ ಪ್ರಧಾನ ಆಹಾರ. ಬೆಳಗಿನ ಹೊತ್ತು ಮತ್ತು ಸಂಜೆ ಆಹಾರಕ್ಕಾಗಿ ಅಲೆದಾಡುತ್ತದೆ. ಹಗಲೆಲ್ಲ ವಿಶ್ರಮಿಸುತ್ತ ಕಾಲ ಕಳೆಯುತ್ತದೆ. ಜುಲೈ-ಸೆಪ್ಟೆಂಬರ್ ತಿಂಗಳುಗಳ ನಡುವಣ ಕಾಲದಲ್ಲಿ ಗಂಡು ಹೆಣ್ಣುಗಳು ಕೂಡುತ್ತವೆ. ಹೆಣ್ಣು ಸುಮಾರು 9 ತಿಂಗಳು ಗರ್ಭಧಾರಣೆಯ ಅವಧಿಯ ಅನಂತರ ಒಂದೇ ಒಂದು ಮರಿಯನ್ನು ಈನುತ್ತದೆ. ಮರಿಯ ಪಾಲನೆಯನ್ನು ಗಂಡು, ಹೆಣ್ಣು, ಕೆಲವೊಮ್ಮೆ ಹಿಂಡಿನ ಇತರ ಕೋಣಗಳೂ ನೋಡಿಕೊಳ್ಳುತ್ತದೆ. ಸುಮಾರು ಒಂದು ವರ್ಷ ಕಾಲ ಮರಿ ಹಾಲು ಕುಡಿದೇ ಜೀವಿಸುತ್ತದೆ. 3 ವರ್ಷಗಳಾದ ಆನಂತರ ಸ್ವತಂತ್ರ ಜೀವನ ನಡೆಸಲು ಪ್ರಾರಂಭಿಸುತ್ತದೆ. ಯೂರೋಪಿನ ಕಾಡುಕೋಣ (ಬೈಸನ್ ಬೊನಾಸಸ್) ಹೆಚ್ಚು ಕಡೆಮೆ ಅಮೆರಿಕದ ಪ್ರಾಣಿಯಂತೆಯೇ ಇದೆ. ಆದರೆ ಅದಕ್ಕಿಂತ ದೊಡ್ಡ ಗಾತ್ರದ್ದು. ಇದಕ್ಕೆ ವೈಸೆಂಟ್ ಎಂಬ ಹೆಸರೂ ಇದೆ. ಪುರಾತನ ಕಾಲದಲ್ಲಿ ಯೂರೋಪ್ ಮತ್ತು ಏಷ್ಯದ ಕಾಡುಗಳಲ್ಲಿ ಹೇರಳವಾಗಿತ್ತೆಂದು ಹೇಳಿಕೆ. ಈಗ ಪೋಲೆಂಡ್ ಮತ್ತು ಲಿಥುವೇನಿಯಗಳ ವನ್ಯಪ್ರದೇಶದÀಲ್ಲಿ ಮಾತ್ರ ಇದೆ. ಜೀವನಕ್ರಮದಲ್ಲಿ ಅಮೇರಿಕದ ಕಾಡುಕೋಣವನ್ನು ಹೋಲುತ್ತದೆ.

 

(ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ